ಟಿಪರೆರೀ
ಐರ್ಲೆಂಡ್ ಗಣರಾಜ್ಯದ ಮನ್‍ಸ್ಟರ್ ಪ್ರಾಂತ್ಯದಲ್ಲಿರುವ ಒಂದು ಕೌಂಟಿ (ವಿಭಾಗ); ಪಟ್ಟಣ, ಜಿಲ್ಲೆ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಟಿಪರೆರೀ ಎಂಬ ಹಾಡಿನಿಂದಾಗಿ ಈ ಹೆಸರು ತುಂಬ ಜನಪ್ರಿಯವಾಯಿತು. ಟಿಪರೆರೀ ವಾಸ್ತವವಾಗಿ ಪ್ರೇಮಪ್ರಸಂಗವನ್ನು ಕುರಿತ ಒಂದು ಲಾವಣಿ. ಆದರೆ ಸೈನಿಕರು ಇದನ್ನು ತಮ್ಮ ನಡೆ ಹಾಡನ್ನಾಗಿ ಬಳಸಿಕೊಂಡರು. ಅಲ್ಲಿಂದ ಮುಂದೆ ಇದು ಅತ್ಯಂತ ಜನಪ್ರಿಯ ಯುದ್ಧಗೀತೆಗಳಲ್ಲಿ ಒಂದಾಗಿ ಪರಿಣಮಿಸಿತು. ಈ ಪ್ರಸಿದ್ಧ ಗೀತೆಯನ್ನು ಅನುಕರಿಸಿ ಕನ್ನಡದ ನಾಟಕಕಾರ ಕೈಲಾಸಂ ಅವರು ನಮ್ ತಿಪ್ಪಾರಳ್ಳಿ ಬಲು ದೂರ ಎಂಬ ಗೀತೆಯನ್ನು ರಚಿಸಿ ಹಾಡುತ್ತಿದ್ದರು.

ಟಿಪರೆರೀ ಕೌಂಟಿ ಒಂದು ಗ್ರಾಮಾಂತರ ಪ್ರದೇಶ. ಷ್ಯಾನನ್ ನದಿಯಿಂದ ಷುಯಿರ್ ನದಿಯವರೆಗೆ, ಸು. 60 ಮೈ.ಗಳ (97 ಕಿಮೀ.) ವಿಶಾಲ ಪಟ್ಟಿಯಾಗಿ ಹಬ್ಬಿರುವ ಟಿಪರೆರೀಯ ನೆಲದ ವಿಸ್ತೀರ್ಣ 1,643 ಚ.ಮೈ. (4,255 ಚ.ಮೀ.); ಜನಸಂಖ್ಯೆ 1,23,196 (1971). ಆಡಳಿತ ಕೇಂದ್ರ ಕ್ಲಾನ್‍ಮೆಲ್ (11,630). ಇಲ್ಲಿಯ ಜನರಲ್ಲಿ ವಲಸೆ ಹೋಗುವ ಪ್ರವೃತ್ತಿ ಹೆಚ್ಚಾಗಿರುವುದರಿಂದ ಇಲ್ಲಿಯ ಜನಸಂಖ್ಯೆ ಎಂದೂ ಕಡಿಮೆಯಾಗಿಯೇ ಇದೆ. ಈ ಜನಸಂಖ್ಯೆಯ ಸೇ. 97ರಷ್ಟು ಮಂದಿ ರೋಮನ್ ಕ್ಯಾತೊಲಿಕರು.

ಈ ಪ್ರದೇಶದ ಗಡಿನಾಡಿನಲ್ಲಿ ಅನೇಕ ಪರ್ವತಗಳಿವೆ. ಪಶ್ಚಿಮದಲ್ಲಿ ಇರುವ ಕೀಪರ್ ಹಿಲ್‍ನ ಎತ್ತರ 2,278'. ದಕ್ಷಿಣದಲ್ಲಿ ನಾಕ್‍ಮೀಲ್‍ಡೌನ್ ಹಾಗೂ ಗ್ಯಾಲ್ಟೀ ಪರ್ವತಶ್ರೇಣಿಗಳು ಅನುಕ್ರಮವಾಗಿ 2,609' ಮತ್ತು 3,015' ಎತ್ತರವಾಗಿವೆ. ಆಗ್ನೇಯದಲ್ಲಿ ಕಿಲ್‍ಕೆನಿಯ ಬಳಿ ಸ್ಲಿವನ್‍ಮಾನ್ ಪರ್ವತದ ಎತ್ತರ 2,364'.

ವ್ಯವಸಾಯ ಇಲ್ಲಿಯ ಪ್ರಮುಖ ಉದ್ಯೋಗ. ಆಲೂಗೆಡ್ಡೆ, ಟರ್ನಿಪ್, ಓಟ್ಸ್, ಗೋದಿ, ಬಾರ್ಲಿ ಮತ್ತು ಕಬ್ಬು ಮುಖ್ಯ ಬೆಳೆಗಳು. ಕಲ್ಲಿದ್ದಲು, ತಾಮ್ರ, ಸೀಸ, ಸತು ಮೊದಲಾದ ನಿಕ್ಷೇಪಗಳಿದ್ದರೂ ಇವನ್ನು ಇನ್ನೂ ಆರ್ಥಿಕವಾಗಿ ಲಾಭದಾಯಕವಾಗಿ ಬಳಸಿಕೊಂಡಿಲ್ಲ. ಮಾಂಸ ಮತ್ತು ಔಷಧೋಪಕರಣಗಳ ಕೈಗಾರಿಕೆ ರಾಸ್‍ಕ್ರೇದಲ್ಲೂ ಸಕ್ಕರೆ ಕೈಗಾರಿಕೆ ತರ್ಲಸ್‍ನಲ್ಲೂ ಚರ್ಮಹದಗಾರಿಕೆ ಕ್ಯಾರಿಕ್ ಆನ್ ಷುಯಿರ್‍ನಲ್ಲೂ ಸುರಕ್ಷಿತ ಗಾಜಿನ ಕೈಗಾಗಿಕೆ ಟೆಂಪಲ್ ಮೋರ್‍ನಲ್ಲೂ ಕ್ಷೀರೋದ್ಯಮ ಟಿಪರೆರೀಯಲ್ಲೂ ನಾನಾ ಬಗೆಯ ಕೈಗಾರಿಕೆಗಳು ಕ್ಲಾನ್‍ಮೆಲ್‍ನಲ್ಲೂ ಇವೆ. ಕ್ಷೀರ್ಯೋದ್ಯಮ ಮುಖ್ಯ ಕೈಗಾರಿಕೆ.

ಟಿಪರೆರೀ ಪಟ್ಟಣ ಆರ ನದಿಯ ಮೇಲೆ ಡಬ್ಲಿನ್‍ನಿಂದ 112 ಮೈ. (180 ಕಿಮೀ.) ನೈಋತ್ಯಕ್ಕೆ, ಕ್ಲಾನ್‍ಮೆಲ್‍ನಿಂದ 24 ಮೈ. ವಾಯವ್ಯಕ್ಕೆ ಇದೆ. ಜನಸಂಖ್ಯೆ 4,592 (1971). ಇದು ಟಿಪರೆರೀ ಪಟ್ಟಣ ಜಿಲ್ಲೆಯ ಕೇಂದ್ರ. ಜಾನ್ ದೊರೆ ಐರ್ಲೆಂಡಿನ ಪ್ರಭುವಾಗಿದ್ದಾಗ ಇಲ್ಲಿ ದುರ್ಗವೊಂದನ್ನು ನಿರ್ಮಿಸಿದ್ದ. ಇದರ ಸುತ್ತ ಪಟ್ಟಣ ಬೆಳೆಯಿತು. 3ನೆಯ ಹೆನ್ರಿಯ ಅಧಿಕಾರಾವಧಿಯಲ್ಲಿ ಇಲ್ಲಿ ಆಗಸ್ಟಿನ್ ಪಂಥದ ಕ್ರೈಸ್ತಮಠವೊಂದನ್ನು ಸ್ಥಾಪಿಸಲಾಗಿತ್ತು. ಇಲ್ಲಿ ಹಾಲಿನಪುಡಿ, ಖನಿಜಜಲ, ಲಿನೋಲಿಯಂ ಹಾಗೂ ಕೈಕವಚಗಳ ಕೈಗಾರಿಕೆಗಳಿವೆ. ಪಟ್ಟಣಕ್ಕೆ 4 ಮೈ. ದೂರದಲ್ಲಿ ನವ ಟಿಪರೆರೀ ಇದೆ. ಜಮೀನು ವಿವಾದವೊಂದರ ಪರಿಣಾಮವಾಗಿ ತಮ್ಮ ಹಿಡಿವಳಿಗಳನ್ನು ಕಳೆದುಕೊಳ್ಳಬೇಕಾಗಿ ಬಂದವರಿಗಾಗಿ 1890ರಲ್ಲಿ ಇದನ್ನು ಸ್ಥಾಪಿಸಲಾಯಿತು. ಆದರೆ ಅನಂತರ ಇದನ್ನು ತೊರೆಯಲಾಯಿತು. ದೇಶಭಕ್ತ ಕವಿಯೂ ಕಾದಂಬರಿಕಾರನೂ ಆದ ಚಾಲ್ರ್ಸ್ ಕಿಕ್ಹ್ಯಾಮನ ಸ್ಮಾರಕಗಳು ಟಿಪರೆರೀಯಲ್ಲಿವೆ.
(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ